ಅಡಿಲೇಡ್ ಟೆಸ್ಟ್‌ನಲ್ಲಿ ಓಪನರ್ ಬದಲಾದರು, ಹೀಗಾಗಿ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಕ್ರಮಾಂಕ ಕೂಡ ಬದಲಾಯಿತು. ಆದರೆ ಬ್ಯಾಟಿಂಗ್ ಕ್ರಮಾಂಕ ಬದಲಾದರೂ ರೋಹಿತ್ ಅವರ ಪ್ರದರ್ಶನ ಮಾತ್ರ ಬದಲಾಗಲಿಲ್ಲ. 7 ವರ್ಷಗಳ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ರೋಹಿತ್ ಶರ್ಮಾಗೆ ಎರಡೂ ಇನ್ನಿಂಗ್ಸ್‌ಗಳಲ್ಲಿ ಒಂದಂಕಿ ಕೂಡ ದಾಟಲು ಸಾಧ್ಯವಾಗಲಿಲ್ಲ. ಮಗನ ಜನನದ ಕಾರಣ ಪರ್ತ್ ಟೆಸ್ಟ್ನಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ಅಡಿಲೇಡ್ ಟೆಸ್ಟ್‌ನಲ್ಲಿ ತಂಡದ ಪರ ಕಣಕ್ಕಿಳಿದಿದ್ದರು. ಮಗನ ಆಗಮನದ ನಂತರವಾದರೂ ರೋಹಿತ್ ಲಯ ಕಂಡುಕೊಳ್ಳಬಹುದು ಎಂದು ನಿರೀಕ್ಷಿಸಿದ್ದವರನ್ನು ರೋಹಿತ್ ಮತ್ತೆ ನಿರಾಸೆಗೊಳಿಸಿದರು. ಅಡಿಲೇಡ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್ನಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ರೋಹಿತ್ 23 ಎಸೆತಗಳನ್ನು ಎದುರಿಸಿ ಕೇವಲ 3 ರನ್ ಕಲೆಹಾಕಿ ಸ್ಕಾಟ್ ಬೋಲ್ಯಾಂಡ್ ಎಸೆತದಲ್ಲಿ ಎಲ್ ಬಿಡಬ್ಲ್ಯೂ ಆಗಿ ಔಟಾದರು. ಇನ್ನ ಎರಡನೇ ಇನ್ನಿಂಗ್ಸ್ನಲ್ಲೂ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದಿದ್ದ ರೋಹಿತ್ ಶರ್ಮಾ 15 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಸಹಿತ 6 ರನ್ ಕಲೆಹಾಕಲಷ್ಟೇ ಶಕ್ತರಾದರು. ಅಂದರೆ ರೋಹಿತ್ ಈ ಎರಡು ಇನ್ನಿಂಗ್ಸ್‌ಗಳಲ್ಲಿ ಕಲೆಹಾಕಿದ್ದು ಕೇವಲ 9 ರನ್ ಅಷ್ಟೆ. ವಾಸ್ತವವಾಗಿ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಲ್ಲಿ ಬಹಳ ದಿನಗಳಿಂದ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. 2022 ರಿಂದಲೂ ರನ್ ಬರ ಎದುರಿಸುತ್ತಿರುವ ರೋಹಿತ್ ಕಳೆದ ಎರಡು ವರ್ಷಗಳಲ್ಲಿ ಆಡಿರುವ 38 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಕೇವಲ 33ರ ಸರಾಸರಿಯಲ್ಲಿ 1226 ರನ್ ಗಳಿಸಿದ್ದಾರೆ. ಅದರಲ್ಲೂ ಕಳೆದ 11 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಫಾರ್ಮ್ ಅತ್ಯಂತ ಕಳಪೆಯಾಗಿದೆ.
0 Comments