21ನೇ ಶತಮಾನದ ಮೊದಲ ವರ್ಷ ಅಂದರೆ 2000ನೇ ಇಸವಿ ಭಾರತೀಯ ಚೆಸ್‌ಗೆ ವಿಶೇಷವಾಗಿತ್ತು. ಆ ವರ್ಷ, ಮೊದಲ ಬಾರಿಗೆ ಚೆಸ್ ಜಗತ್ತಿನಲ್ಲಿ ಭಾರತೀಯನೊಬ್ಬ ವಿಶ್ವ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದರು. ಭಾರತದ ಮೊದಲ ಗ್ರ್ಯಾಂಡ್ ಮಾಸ್ಟರ್ ಎನಿಸಿಕೊಂಡ ವಿಶ್ವನಾಥನ್ ಆನಂದ್ ಈ ಸಾಧನೆ ಮಾಡಿದ್ದರು.ಈಗ 2024 ಭಾರತೀಯ ಚೆಸ್‌ಗೆ ಸ್ಮರಣೀಯ ರೀತಿಯಲ್ಲಿ ಕೊನೆಗೊಂಡಿದೆ. ಭಾರತದ ಯುವ ಗ್ರ್ಯಾಂಡ್ ಮಾಸ್ಟರ್ ಡಿ ಗುಕೇಶ್ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಕೇವಲ 18ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಗ್ರ್ಯಾಂಡ್ ಮಾಸ್ಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದರ ಜೊತೆಗೆ ಒಂದೇ ವರ್ಷದಲ್ಲಿ ಹ್ಯಾಟ್ರಿಕ್ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ. 18ರ ಹರೆಯದ ದೊಮ್ಮರಾಜು ಗುಕೇಶ್ ಅವರು ಡಿಸೆಂಬರ್ ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಮಣಿಸುವ ಮೂಲಕ ಪ್ರಪಂಚದ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಎನಿಸಿಕೊಂಡರು. ಹಾಗೆಯೇ ಭಾರತದ ಮೊದಲ ಮತ್ತು ಶ್ರೇಷ್ಠ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ನಂತರ ಈ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯ ಎನಿಸಿಕೊಂಡಿದ್ದಾರೆ. ಭಾರತಕ್ಕೆ ಚೆಸ್ ಕ್ರಾಂತಿ ತಂದ ಆನಂದ್ 5 ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ. ಇದೀಗ ಈ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯ ಎನಿಸಿಕೊಂಡಿರುವ ಗುಕೇಶ್ ಕೂಡ ವಿಶ್ವನಾಥನ್ ಆನಂದ್ ಅವರ ಅಕಾಡೆಮಿಯಿಂದ ಬಂದಿರುವುದು ಸಂತೋಷದ ಕಾಕತಾಳೀಯವಾಗಿದೆ. ಹಾಗೆಯೇ ಈ ಚಾಂಪಿಯನ್‌ಶಿಪ್ ಗೆದ್ದಿರುವ ಗುಕೇಶ್, ಗುರು ಆನಂದ್ ಅವರು ಮಾಡಿರದ ಸಾಧನೆಯನ್ನು ಈ ಒಂದೇ ವರ್ಷದಲ್ಲಿ ಸಾಧಿಸಿ ತೋರಿಸಿದ್ದಾರೆ.
0 Comments