*ನವದೆಹಲಿ:* ಭಾರತೀಯ ಜನತಾ ಪಕ್ಷದ ಪಶ್ಚಿಮ ಬಂಗಾಳದ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಸುಕಾಂತ ಮಜುಂದಾರ್ ಅವರ ಪತ್ನಿ ಎರಡು ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿರುವ ದೂರಿನ ಕುರಿತು ಚುನಾವಣಾ ಆಯೋಗ (EC) ತನಿಖೆಯನ್ನು ಪ್ರಾರಂಭಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಸಚಿವರ ಪತ್ನಿ ಕೋಯೆಲ್ ಮಜುಂದಾರ್ ಅವರು ವಿಭಿನ್ನ EPIC ಸಂಖ್ಯೆಗಳನ್ನು ಹೊಂದಿರುವ ಎರಡು ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ ಎಂದು ಆರಂಭಿಕ ತನಿಖೆಯಲ್ಲಿ ಕಂಡುಬಂದಿದೆ, ಒಂದು ಬಳೂರ್ಘಾಟ್ನಲ್ಲಿ ಮತ್ತು ಇನ್ನೊಂದು ಜಲಪೈಗುರಿಯಲ್ಲಿ ನೋಂದಾಯಿಸಲಾಗಿದೆ.
ಒಂದು ಕಾರ್ಡ್ ನ್ನು ಅವರ ಮೊದಲ ಹೆಸರು ಕೋಯೆಲ್ ಚೌಧರಿ ಅಡಿಯಲ್ಲಿ ನೀಡಲಾಗಿದ್ದರೆ, ಎರಡನೆಯದನ್ನು ಅವರ ಮದುವೆಯ ನಂತರ ಕೋಯೆಲ್ ಮಜುಂದಾರ್ ಹೆಸರಿನಲ್ಲಿ ರಚಿಸಲಾಗಿದೆ. "ಅವರು ಫಾರ್ಮ್ 18 ನ್ನು ಸಲ್ಲಿಸಿದ್ದರೆ ಇದನ್ನು ತಪ್ಪಿಸಬಹುದಿತ್ತು. ಯಾವುದೇ ಬದಲಾವಣೆಗಳನ್ನು EC ಗೆ ತಿಳಿಸುವುದು ಕಾರ್ಡ್ ಹೊಂದಿರುವವರ ಜವಾಬ್ದಾರಿಯಾಗಿದೆ. ಈ ಪ್ರಕರಣದಲ್ಲಿ, ಆಯೋಗಕ್ಕೆ ಯಾವುದೇ ಮಾಹಿತಿಯನ್ನೂ ತಿಳಿಸಲಾಗಿಲ್ಲ" ಎಂದು ಅಧಿಕಾರಿ ಹೇಳಿದ್ದಾರೆ. ಅವರು ಫಾರ್ಮ್ 6 ಅನ್ನು ಸಲ್ಲಿಸಿದ ನಂತರ ಬಳೂರ್ಘಾಟ್ನಲ್ಲಿ ಹೊಸ ಮತದಾರರ ಕಾರ್ಡ್ ನೀಡಲಾಗಿದೆ ಎಂದು ಅಧಿಕಾರಿ ಮತ್ತಷ್ಟು ವಿವರಿಸಿದ್ದಾರೆ. "ಎಪಿಐಸಿ ಸಂಖ್ಯೆಗಳು ಮತ್ತು ಉಪನಾಮಗಳು ವಿಭಿನ್ನವಾಗಿರುವುದರಿಂದ, ದೋಷವು ತಕ್ಷಣವೇ ಪತ್ತೆಯಾಗಿಲ್ಲ. ಗುರುತನ್ನು ದೃಢೀಕರಿಸಲು ನಾವು ಈಗ ಛಾಯಾಚಿತ್ರಗಳು ಮತ್ತು ಇತರ ವೈಯಕ್ತಿಕ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ" ಎಂದು ಆಯೋಗದ ಅಧಿಕಾರಿ ಹೇಳಿದ್ದಾರೆ.
0 Comments