*ವಾಷಿಂಗ್ಟನ್:* ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ಯಾರಿಫ್ ಗುಮ್ಮ ಮತ್ತೆ ಎರಗಿ ಬಂದಿದೆ. ಈ ಬಾರಿ ಅಮೆರಿಕದ ಕಂಪನಿಯತ್ತ ಈ ಗುಮ್ಮ ನುಗ್ಗಿದೆ. ಭಾರತದಲ್ಲಿ ತಯಾರಿಸಲಾದ ಆ್ಯಪಲ್ ಫೋನ್ಗಳ ಮೇಲೆ ಶೇ. 25ರಷ್ಟು ತೆರಿಗೆ ಹಾಕುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಭಾರತ ಮಾತ್ರವಲ್ಲ, ಅಮೆರಿಕ ಬಿಟ್ಟು ಬೇರೆಲ್ಲೇ ತಯಾರಿಸಿದರೂ 25 ಪ್ರತಿಶತದಷ್ಟು ಆಮದು ಸುಂಕ ಕಟ್ಟಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷರು ಬೆದರಿಸಿದ್ದಾರೆ. ತಮ್ಮ ಟ್ರೂತ್ ಸೋಷಿಯಲ್ ಪ್ಲಾಟ್ಫಾರ್ಮ್ನಲ್ಲಿ ಅವರು ಪೋಸ್ಟ್ ಹಾಕಿದ್ದಾರೆ. ಎಕ್ಸ್ನಲ್ಲೂ ಟ್ರಂಪ್ ಈ ವಿಚಾರ ಪ್ರಕಟಿಸಿದ್ದಾರೆ. ಅಮೆರಿಕದಲ್ಲಿ ಮಾರಾಟವಾಗುವ ಐಫೋನ್ಗಳು ಅಮೆರಿಕದಲ್ಲೇ ತಯಾರಾಗಬೇಕು. ಭಾರತದಲ್ಲಾಗಲೀ ಮತ್ತೆಲ್ಲಿಯಾಗಲೀ ಅದು ತಯಾರಾಗಿದ್ದರೆ ಆ್ಯಪಲ್ ಕಂಪನಿಯು ಅಮೆರಿಕಕ್ಕೆ ಕನಿಷ್ಠ ಶೇ. 25ರಷ್ಟು ಟ್ಯಾರಿಫ್ ಕಟ್ಟಬೇಕಾಗುತ್ತದೆ’ ಎಂದು ಡೊನಾಲ್ಡ್ ಟ್ರಂಪ್ ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ. ಈ ಹಿಂದೆಯೂ ಅಮೆರಿಕ ಅಧ್ಯಕ್ಷರು ಆ್ಯಪಲ್ನ ಐಫೋನ್ ವಿಚಾರವಾಗಿ ತಮ್ಮ ಈ ನಿಲುವನ್ನು ಅನೇಕ ಬಾರಿ ಜಾಹೀರುಗೊಳಿಸಿದ್ದಿದೆ. ಹೀಗಾಗಿ, ಅವರ ಈ ಹೇಳಿಕೆ ಅನಿರೀಕ್ಷಿತವಲ್ಲ. ಆದಾಗ್ಯೂ ಕೂಡ ಆ್ಯಪಲ್ ಕಂಪನಿ ಭಾರತದಲ್ಲಿ ಹೂಡಿಕೆ ಮಾಡುವ ಅಚಲ ನಿಲುವನ್ನು ಮುಂದುವರಿಸಿದೆ. ಆ್ಯಪಲ್ ಕಂಪನಿಯ ಅತಿ ಜನಪ್ರಿಯ ಉತ್ಪನ್ನಗಳಲ್ಲಿ ಐಫೋನ್ ಮೊದಲು ಬರುತ್ತದೆ. ಅಮೆರಿಕದಲ್ಲಿ ಒಂದು ವರ್ಷದಲ್ಲಿ ಆರು ಕೋಟಿ ಐಫೋನ್ಗಳನ್ನು ಮಾರಲಾಗುತ್ತದೆ. ಇದರಲ್ಲಿ ಶೇ. 80ರಷ್ಟು ಫೋನ್ಗಳು ಚೀನಾದಲ್ಲಿ ನಿರ್ಮಾಣ ಆಗುತ್ತಿವೆ. ಭಾರತದಲ್ಲಿ ಇತ್ತೀಚೆಗೆ ಐಫೋನ್ ತಯಾರಿಕೆ ಹೆಚ್ಚಿಸಲಾಗುತ್ತಿದೆ. ಹೆಚ್ಚಿನ ಮೇಡ್ ಇನ್ ಇಂಡಿಯಾ ಐಫೋನ್ಗಳನ್ನು ಅಮೆರಿಕದ ಮಾರುಕಟ್ಟೆಗೆ ಕಳುಹಿಸಲಾಗುತ್ತಿದೆ.
0 Comments