ಬೆಂಗಳೂರು ಚಲನಚಿತ್ರೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭಾಷಣದ ವೇಳೆ ಸಿನಿಮಾ ನಟ, ನಟಿಯರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಅಲ್ಲದೆ, ನಿಮ್ಮ ಚಲನ ವಲನ, ಹಾವ ಭಾವ ಎಲ್ಲವೂ ನಮಗೆ ಅರ್ಥವಾಗುತ್ತದೆ, ಎಲ್ಲವನ್ನು ಗಮನಿಸುತ್ತಿರುತ್ತೇನೆ’ ಎಂದು ಹೇಳಿದರು. ಅಷ್ಟು ಮಾತ್ರವೇ ಅಲ್ಲದೆ ಸಿನಿಮಾ ರಂಗದವರ ಮೇಲೆ ವಿಶೇಷವಾಗಿ ನಮ್ಮ ನಟ, ನಟಿಯರ ಮೇಲೆ ನನಗೆ ಬಹಳ ಸಿಟ್ಟಿದೆ ಎಂದು ನೇರವಾಗಿಯೇ ಸಿಟ್ಟು ಹೊರಹಾಕಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ‘ನನಗೆ ಚಲನಚಿತ್ರ ವಾಣಿಜ್ಯ ಮಂಡಳಿ, ಈ ಸಿನಿಮಾ ನಟರ ಬಗ್ಗೆ ನನಗೆ ಬಹಳ ಸಿಟ್ಟು ಬಂದುಬಿಟ್ಟಿದೆ. ಅದಕ್ಕೆ ಕಾರಣವೂ ಇದೆ. ನಾವು ಕೋವಿಡ್ ಮುಗಿದ ಸಮಯದಲ್ಲಿ ಒಂದು ಕಾರ್ಯಕ್ರಮ ಮಾಡಿದ್ದೆವು, ನಮ್ಮ ಜಲ ನಮ್ಮ ಹಕ್ಕು ಎಂಬ ಜಾಥಾ ಮಾಡಿದ್ದೆವು, ನಮ್ಮ ಜನರಿಗೆ ನೀರು ಕೊಡುವ ಉದ್ದೇಶದಿಂದಾಗಿ ನಾವು, ಸಿದ್ದರಾಮಯ್ಯನವರು ಪಾದಯಾತ್ರೆ ಮಾಡಿದ್ದೆವು. ಆದರೆ ಆಗ ಯಾವ ನಟರೂ ಸಹ ನಮಗೆ ಬೆಂಬಲ ಕೊಡಲಿಲ್ಲ, ಸಾಧು ಕೋಕಿಲ ಮತ್ತು ದುನಿಯಾ ವಿಜಿ ಬಿಟ್ಟರೆ ಇನ್ಯಾರೂ ಸಹ ನಮಗೆ ಬೆಂಬಲ ಕೊಡಲಿಲ್ಲ’ ಎಂದು ನೇರವಾಗಿಯೇ ಹೇಳಿದರು ಡಿಕೆ ಶಿವಕುಮಾರ್. ಅದಕ್ಕೆ ನಮ್ಮ ಸರ್ಕಾರ ಬಂದ ಕೂಡಲೇ ಸಾಧು ಕೋಕಿಲ ಅವರಿಗೆ ಏನಾದರೂ ಮಾಡಬೇಕು, ಅವರಿಗೆ ಗೌರವ ಕೊಡಬೇಕು ಎಂದು ಅಕಾಡೆಮಿ ಅಧ್ಯಕ್ಷ ಸ್ಥಾನ ಕೊಟ್ಟೆವು. ನಮ್ಮ ಕಷ್ಟಕಾಲದಲ್ಲಿ ಜೊತೆಗೆ ನಿಂತವರನ್ನು ಗುರುತಿಸಬೇಕು ಎಂದು ಹೇಳಿ ಅವರಿಗೆ ಸ್ಥಾನ ಕೊಟ್ಟೆವು. ನನ್ನನ್ನು ಕೆಲವು ನಟರೆಲ್ಲ ಬಳಸಿಕೊಳ್ಳುತ್ತಾರೆ. ಆ ಮೇಲೆ ಬಿಸಾಡುತ್ತಾರೆ. ಆದರೆ ಹಾಗೆ ಆಗುವುದಿಲ್ಲ. ನಾನು ಇದನ್ನೆಲ್ಲ ಗಮನಿಸುವುದಿಲ್ಲ ಎಂದು ಯಾರೂ ಸಹ ತಿಳಿದುಕೊಳ್ಳಲು ಹೋಗಬೇಡಿ. ನಮಗೆ ಎಲ್ಲರ ನಾಡಿ ಮಿಡಿತ, ಯಾರು ಹೇಗೆ, ಯಾರ ಚಲನೆ ಹೇಗೆ ಎಲ್ಲವೂ ನಮಗೆ ಅರಿವಿದೆ’ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು ಡಿಕೆ ಶಿವಕುಮಾರ್.
0 Comments