ಮೃಗಾಲಯ, ಬೀಚ್, ಪಾರ್ಕ್ ಇನ್ನಿತರೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಹೊಸ ಹೊಸ ತಂತ್ರಗಳನ್ನು, ಒಳ್ಳೊಳ್ಳೆ ಪ್ರಚಾರ ಗಿಮಿಕ್‌ಗಳನ್ನು ಮಾಡಲಾಗುತ್ತದೆ. ಆದ್ರೆ ಇಲ್ಲೊಂದು ಮೃಗಾಲಯ ಬಣ್ಣ ಬಳಿದ ನಾಯಿಗಳನ್ನೇ ಹುಲಿಯೆಂದು ಹೇಳಿ ಪ್ರವಾಸಿಗರಿಗೆ ಟೋಪಿ ಹಾಕಿದೆ. ಹೌದು ಚೀನಾದ ಮೃಗಾಲಯ ಹುಲಿಯಂತೆ ಕಾಣಲು ಚೌ ಚೌ ನಾಯಿಗಳಿಗೆ ಬಣ್ಣ ಬಳಿದಿದ್ದು, ಪ್ರಚಾರದ ಭಾಗವಾಗಿ ಹೀಗೆ ಮಾಡಿದ್ದು, ಎಂದು ಮೃಗಾಲಯದ ಆಡಳಿತ ಮಂಡಳಿ ತಪ್ಪು ಒಪ್ಪಿಕೊಂಡಿದೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದ್ದು, ಮೃಗಾಲಯದ ಈ ಗಿಮಿಕ್‌ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಚೀನಾದ ಜಿಯಾಂಗ್ಸು ಪ್ರಾಂತ್ಯದ ತೈಝೌನಲ್ಲಿರುವ ಮೃಗಾಲಯವೊಂದು ಚೌ ಚೌ ಜಾತಿಯ ನಾಯಿಗಳಿಗೆ ಕಪ್ಪು ಮತ್ತು ಕೇಸರಿ ಬಣ್ಣ ಬಳಿದು ಇದು ಪಟ್ಟೆ ಹುಲಿಯೆಂದು ಹೇಳಿ ಪ್ರವಾಸಿಗರಿಗೆ ಟೋಪಿ ಹಾಕಿದೆ. ಈ ನಾಯಿಗಳ ವಿಡಿಯೋವನ್ನು ವ್ಯಕ್ತಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಇದು ಸಖತ್ ವೈರಲ್ ಆಗಿ ಮೃಗಾಲಯದ ವಿರುದ್ಧ ಬಾರೀ ಆಕ್ರೋಶ ಕೂಡಾ ವ್ಯಕ್ತವಾಗಿತ್ತು. ಇದಾದ ಬಳಿಕ ಮೃಗಾಲಯ ಸ್ಥಳೀಯ ಮಾಧ್ಯಮಗಳ ಬಳಿ ತಪ್ಪೊಪಿಕೊಂಡಿದ್ದು, “ಪ್ರಚಾರ ಗಿಮಿಕ್ ಸಲುವಾಗಿ ಚೌ ಚೌ ನಾಯಿಗಳಿಗೆ ಬಣ್ಣ ಬಳಿದಿದ್ದೇವೆ. ಇದರಿಂದ ನಾಯಿಗಳ ಆರೋಗ್ಯಕ್ಕೆ ಯಾವುದೇ ಅಪಾಯವಾಗಿಲ್ಲ ಮತ್ತು ಅವುಗಳಿಗೆ ಹಾನಿಯಾಗಿಲ್ಲ” ಎಂದು ಹೇಳಿದೆ. ಇದೇ ಮೊದಲಲ್ಲ ಹೋದ ವರ್ಷ ಈ ಮೃಗಾಲಯ ಪಾಂಡಾಗಳನ್ನು ಹೋಲುವಂತೆ ನಾಯಿಗಳಿಗೆ ಬಣ್ಣ ಬಳಿದು ಸುದ್ದಿಯಾಗಿತ್ತು. ಇದೀಗ ಪ್ರಚಾರದ ಗಿಮಿಕ್‌ಗಾಗಿ ನಾಯಿಗಳಿಗೆ ಹುಲಿಯ ಬಣ್ಣವನ್ನು ಬಳಿದಿದೆ. ಮೃಗಾಲಯದ ಈ ಚೀಪ್ ಗಿಮಿಕ್ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
0 Comments