ಹೆಲ್ತ್ ಇನ್ಷೂರೆನ್ಸ್ ಇವತ್ತು ಬಹಳ ಅತ್ಯಗತ್ಯವಾಗಿರುವ ಹಣಕಾಸು ಭದ್ರತಾ ವ್ಯವಸ್ಥೆ. ಮಾರುಕಟ್ಟೆಯಲ್ಲಿ ಹಲವು ಕಂಪನಿಗಳು ವಿವಿಧ ರೀತಿಯ ಹೆಲ್ತ್ ಇನ್ಷೂರೆನ್ಸ್ ಪ್ರಾಡಕ್ಟ್ಗಳನ್ನು ಆಫರ್ ಮಾಡುತ್ತವೆ. ನೀವು ಖರೀದಿಸಿದ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಕೆಲ ವಿಚಾರಗಳಲ್ಲಿ ತೃಪ್ತಿ ಕೊಟ್ಟಿರಬಹುದು, ಇನ್ನೂ ಕೆಲ ವಿಚಾರಗಳಲ್ಲಿ ನಿಮಗೆ ಅಸಮಾಧಾನ ತಂದಿರಬಹುದು. ಸಮರ್ಪಕವಾಗಿ ಕ್ಲೇಮ್ ಆಗದೇ ಇರಬಹುದು, ಹೆಚ್ಚು ರೋಗಗಳಿಗೆ ಕವರೇಜ್ ಸಿಗದಿರಬಹುದು, ಹೀಗೆ ಅಸಮಾಧಾನಕ್ಕೆ ನಾನಾ ಕಾರಣಗಳು ಇರುತ್ತವೆ. ಇಂಥ ಸಂದರ್ಭದಲ್ಲಿ ನೀವು ಇಚ್ಛಿಸಿದಲ್ಲಿ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಯನ್ನು ಬೇರೆ ಕಂಪನಿಗೆ ನೀವು ವರ್ಗಾಯಿಸಲು ಅವಕಾಶ ಇರುತ್ತದೆ. ಮೊಬೈಲ್ ನಂಬರ್ ಅನ್ನು ಬೇರೆ ಟೆಲಿಕಾಂ ಆಪರೇಟರ್ಗೆ ವರ್ಗಾವಣೆ ಮಾಡಿಕೊಂಡ ರೀತಿಯಲ್ಲಿ ನೀವು ಇನ್ಷೂರೆನ್ಸ್ ಕಂಪನಿಯನ್ನು ಬದಲಾಯಿಸಬಹುದು. ಆದರೆ, ಮೊಬೈಲ್ ನಂಬರ್ ಅನ್ನು ಪೋರ್ಟ್ ಮಾಡಿದಷ್ಟು ಸರಾಗವಾಗಿ ಇನ್ಷೂರೆನ್ಸ್ ಕಂಪನಿಯ ವರ್ಗಾವಣೆ ಆಗುವುದಿಲ್ಲ. ತುಸು ಹೆಚ್ಚಿನ ಪ್ರಕ್ರಿಯೆ ಇರುತ್ತದೆ. ಪ್ರಸಕ್ತ ಇನ್ಷೂರೆನ್ಸ್ ಕಂಪನಿಗಿಂತ ಇನ್ನೊಂದು ಕಂಪನಿ ಉತ್ತಮ ಸೇವೆ ಆಫರ್ ಮಾಡುತ್ತಿದ್ದರೆ ಪಾಲಿಸಿಯನ್ನು ವರ್ಗಾವಣೆ ಮಾಡಬಹುದು. ಹಳೆಯ ಪಾಲಿಸಿ ನಿಲ್ಲಿಸಿ ಹೊಸ ಪಾಲಿಸಿ ಖರೀದಿಸಬೇಕಾದರೆ ಹಲವು ಅನನುಕೂಲಗಳು ಬಂದೊದಗಬಹುದು. ಪ್ರೀಮಿಯಮ್ ಹೆಚ್ಚಬಹುದು, ಹಿಂದಿನ ಪಾಲಿಸಿಯಲ್ಲಿ ಗಳಿಸಿರಬಹುದಾದ ನೋ ಕ್ಲೇಮ್ ಬೋನಸ್, ವೇಟಿಂಗ್ ಪೀರಿಯಡ್ ಇತ್ಯಾದಿ ಅನುಕೂಲಗಳು ನಿಂತು ಹೋಗಬಹುದು. ಈ ಕಾರಣಕ್ಕೆ ಪಾಲಿಸಿ ಪೋರ್ಟ್ ಮಾಡುವುದು ಉತ್ತಮ ಕ್ರಮ ಎನಿಸುತ್ತದೆ. ನೀವು ಗಮನಿಸಬೇಕಾದ ಸಂಗತಿ ಎಂದರೆ, ಒಂದು ಹೆಲ್ತ್ ಇನ್ಷೂರೆನ್ಸ್ ಕಂಪನಿಯಿಂದ ಇನ್ನೊಂದು ಕಂಪನಿಗೆ ನಿಮ್ಮ ಪಾಲಿಸಿಯನ್ನು ವರ್ಗಾಯಿಸಲು ಕೆಲ ನಿಯಮಗಳಿವೆ. ಪ್ರಸಕ್ತ ನಿಮ್ಮಲ್ಲಿ ರೀಇಂಬುರ್ಸ್ಮೆಂಟ್ ಪ್ಲಾನ್ ಇದ್ದರೆ ನೀವು ಪೋರ್ಟ್ ಆಗುವ ಕಂಪನಿಯ ರೀ ಇಂಬುರ್ಸ್ಮೆಂಟ್ ಪ್ಲಾನ್ಗೆ ಮಾತ್ರವೇ ವರ್ಗಾವಣೆ ಮಾಡಿಕೊಳ್ಳಬಹುದು. ಟಾಪಪ್ ಪ್ಲಾನ್ ಇದ್ದರೆ ಮತ್ತೊಂದು ಟಾಪ್ ಅಪ್ ಪ್ಲಾನ್ಗೆ ಪೋರ್ಟ್ ಆಗಬಹುದು.
0 Comments